ಗ್ರೇ, ಜಾರ್ಜ್ ಎಡ್ವರ್ಡ್

	1812 - 1898. ಬ್ರಿಟಿಷ್ ವಸಾಹತುಗಳ ಗವರ್ನರ್, ನ್ಯೂಜಿûೀಲೆಂಡಿನ ಪ್ರಧಾನಿ. ಲಿಸ್ಬನಿನಲ್ಲಿ ಜನಿಸಿದ. 1826ರಲ್ಲಿ ಸೈನ್ಯವನ್ನು ಸೇರಿದ. ನಾಲ್ಕು ವರ್ಷಗಳ ಕಾಲ ಐರ್ಲೆಂಡಿನಲ್ಲಿದ್ದು ಉದಾರವಾದಿ ದೃಷ್ಟಿ ಬೆಳೆಸಿಕೊಂಡ. ಪಶ್ಚಿಮ ಆಸ್ಟ್ರೇಲಿಯದ ಉತ್ತರದಲ್ಲಿ ಹಲವಾರು ಪರಿಶೋಧನ ಪ್ರವಾಸ ನಡೆಸಿ ಕೊನೆಗೆ ಆಲ್ಬನಿಯಲ್ಲಿ ನೆಲೆಸಿದ. 1841ರಲ್ಲಿ ಈತನನ್ನು ದಕ್ಷಿಣ ಆಸ್ಟ್ರೇಲಿಯದ ಗವರ್ನರಾಗಿ ನೇಮಿಸಲಾಯಿತು. ಆ ವಸಾಹತಿನ ಪುನಶ್ಚೇತನಕ್ಕಾಗಿ ಈತ ಕೈಗೊಂಡ ಯತ್ನಗಳಿಗಾಗಿ ಇವನಿಗೆ ಕೀರ್ತಿ ಬಂತು. ನ್ಯೂಜಿûೀಲೆಂಡಿನ ಪರಿಸ್ಥಿತಿ ಅತ್ಯಂತ ಆತಂಕಕಾರಿಯಾಗಿದ್ದುದರಿಂದ ಅದನ್ನು ನೇರ್ಪುಗೊಳಿಸುವ ಸಲುವಾಗಿ ಬ್ರಿಟಿಷ್ ಸರ್ಕಾರ ಇವನನ್ನು ಆ ವಸಾಹತಿನ ಗವರ್ನರಾಗಿ ವರ್ಗ ಮಾಡಿತು. ಉತ್ತರದಲ್ಲಿ ನಡೆಯುತ್ತಿದ್ದ ಮೌರಿ ಯುದ್ಧವನ್ನು ಈತ ಕೊನೆಗೊಳಿಸಿದನಲ್ಲದೆ ಅಲ್ಲಿ ಶಾಂತಿ ಸುಭಿಕ್ಷೆ ನೆಲೆಸುವಂತೆ ಮಾಡಿದ. ಈತ ರೂಪಿಸಿದ ಉದಾರವಾದಿ ಸಂವಿಧಾನವನ್ನು ವಸಾಹತುವಾದಿಗಳು ಒಪ್ಪಲಿಲ್ಲ. ಅದನ್ನು ಬ್ರಿಟನಿನ ಸ್ಟೇಟ್ ಸೆಕ್ರೆಟರಿ ಒಪ್ಪಿ ಇದು ಅಧಿನಿಯಮವಾಯಿತು. 1854ರಲ್ಲಿ ಈತ ಕೇಪ್ ಕಾಲೊನಿಯ ಗವರ್ನರ್ ಹಾಗೂ ದಕ್ಷಿಣ ಆಫ್ರಿಕದ ಹೈ ಕಮಿಷನರ್ ಆಗಿ ನೇಮಕಗೊಂಡ. ಟ್ರಾನ್ಸ್‍ವಾಲ್ ಮತ್ತು ಆರೆಂಜ್ ಫ್ರೀಸ್ಟೇಟ್ ಸ್ವಾತಂತ್ರ್ಯಕ್ಕೆ ಮನ್ನಣೆ ನೀಡುವ ಒಡಂಬಡಿಕೆಗಳನ್ನು ಗ್ರೇ ವಿರೋಧಿಸಿದನಲ್ಲದೆ, ಆ ಪ್ರದೇಶದ ರಾಜ್ಯಗಳ ಒಕ್ಕೂಟವನ್ನು ಪ್ರತಿಪಾದಿಸಿದ. ಈತ ಬ್ರಿಟಿಷ್ ಸರ್ಕಾರವನ್ನು ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿಸುತ್ತಾನೆಂಬ ಕಾರಣದಿಂದ ಸರ್ಕಾರ ಇವನನ್ನು ಕೆಲಸದಿಂದ ವಜ ಮಾಡಿತು (1858). ಮರುವರ್ಷ ಈತ ಮತ್ತೆ ನೇಮಕವಾದನಾದರೂ ಈತನ ಒಕ್ಕೂಟ ಸೂತ್ರವನ್ನು ಸರ್ಕಾರ ತಳ್ಳಿ ಹಾಕಿತು.				(ಎ.ಪಿ.)

	1861ರಲ್ಲಿ ಗ್ರೇ ನ್ಯೂಜಿಲೆಂಡಿಗೆ ಮರಳುವ ಇಚ್ಛೆ ವ್ಯಕ್ತಪಡಿಸಿದ. ಸರ್ಕಾರ ಇವನನ್ನು ಮತ್ತೆ ಅಲ್ಲಿಯ ಗವರ್ನರಾಗಿ ನೇಮಿಸಿತು. ಅಲ್ಲಿಯ ಸೇನಾಧಿಕಾರಿ ಹಾಗೂ ಮಂತ್ರಿಗಳೊಂದಿಗೆ ಗ್ರೇ ಜಗಳವಾಡಿದ. 1867ರಲ್ಲಿ ಸರ್ಕಾರ ಇವನಿಗೆ ವಾಪಸ್ ಬರಲು ಆಜ್ಞೆ ನೀಡಿತು. ಈತ ಇಂಗ್ಲೆಂಡಿಗೆ ಹೋಗಿ 1868ರಲ್ಲಿ ನ್ಯೂಜಿûೀಲೆಂಡಿಗೆ ಮರಳಿದ. 1875ರಲ್ಲಿ ಗ್ರೇ ಆಕ್ಲಾಂಡಿನ ಸೂಪರಿಂಟೆಂಡೆಂಟ್ ಆದ. 1877ರಲ್ಲಿ ನ್ಯೂಜಿûೀಲೆಂಡಿನ ಉದಾರವಾದಿ ಮಂತ್ರಿಮಂಡಲದ ಮುಖ್ಯನಾದ. ಪ್ರಧಾನಿಯಾಗಿ ಈತನ ಆಡಳಿತ ಅಷ್ಟೇನೂ ಯಶಸ್ಸು ಗಳಿಸಲಿಲ್ಲ. 1879ರಲ್ಲಿ ಇವನ ಮಂತ್ರಿಮಂಡಲ ಉರುಳಿತು. ಪಕ್ಷದ ನಾಯಕತ್ವದಿಂದಲೂ ಇವನು ಕೆಳಗಿಳಿಯಬೇಕಾಯಿತು. 1895ರ ವರೆಗೂ ಈತ ಪಾರ್ಲಿಮೆಂಟಿನಲ್ಲಿದ್ದು ಉದಾರವಾದಿ ಸುಧಾರಣೆಗಳನ್ನು ಪ್ರತಿಪಾದಿಸುತ್ತಿದ್ದ. ಈತ ತೀರಿಕೊಂಡಿದ್ದು ಲಂಡನಿನಲ್ಲಿ. ಗ್ರೇಗೆ ನೈಟ್ ಪದವಿ ಲಭ್ಯವಾದ್ದು 1848ರಲ್ಲಿ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ